ಅಬೆಲ್, ಜಾನ್ ಜೇಕಬ್	
	ಅಮೆರಿಕದ ಔಷಧಶಾಸ್ತ್ರಜ್ಞ. ಅಂಗ ಕ್ರಿಯೆಯ ರಸಾಯನ ವಿಜ್ಞಾನಿ. ನಾಳವಿರದ ಗ್ರಂಥಿಗಳ ವಿಷಯಗಳ ಪರಿಣತ (1857-1938). ಅಮೆರಿಕದ ಕ್ಲೀವ್‍ಲೇಂಡಿನ ಓಹಿಯೋದಲ್ಲಿ ಮೇ 19, 1857ರಲ್ಲಿ ಹುಟ್ಟಿದ ಮಿಚಿಗನ್ ವಿಶ್ವವಿದ್ಯಾಲಯದ 1883ರಲ್ಲಿ ಪದವಿ ಶಿಕ್ಷಣ ಪಡೆದು, ಮುಂದೆ ಶರೀರಕ್ರಿಯಾಶಾಸ್ತ್ರ, ಔಷಧಶಾಸ್ತ್ರ, ರಸಾಯನಶಾಸ್ತ್ರಗಳನ್ನು ಲೀಪ್‍ಜಿಗ್‍ನಲ್ಲಿ ಅಧ್ಯಯನ ಮಾಡಿದ. ವೈದ್ಯ, ರಸಾಯನ ವಿಜ್ಞಾನ ಪದವಿಗಳನ್ನು ಯೂರೋಪಿನ ವಿಶ್ವವಿದ್ಯಾನಿಲಯಗಳಲ್ಲಿ ಪಡೆದು (1888). ಮುಂದೆ 1893ರಲ್ಲಿ ಜಾನ್‍ಹಾಪ್‍ಕಿನ್ಸ್ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿ ಔಷಧಶಾಸ್ತ್ರದ ಪ್ರಾಧ್ಯಾಪಕನಾದ. ತಾನೇ ಮೊಟ್ಟ ಮೊದಲು ಸ್ಥಾಪಿಸಿ ಈಗಲೂ ಹೆಸರಾಗಿರುವ  ಔಷಧಶಾಸ್ತ್ರ ಮತ್ತು ಪ್ರಾಯೋಗಿಕ ರೋಗ ಚಿಕಿತ್ಸೆ  ಪತ್ರಿಕೆಯ ಸಂಪಾದಕನಾಗಿದ್ದ (1901-1932). ಅಮೆರಿಕಾದಲ್ಲಿ ಔಷಧಶಾಸ್ತ್ರ ಅಧ್ಯಯನವನ್ನು ಆಧುನೀಕರಣಗೊಳಿಸುವಲ್ಲಿ ಅಬೆಲ್ ಪ್ರಮುಖ ಪಾತ್ರವನ್ನು ವಹಿಸಿದ. ಅಡ್ರಿನಲ್ ಗ್ರಂಥಿಗಳಲ್ಲಿ ತಯಾರಾಗುವ, ರಕ್ತ ಒತ್ತಡವೇರಿಸುವ ವಸ್ತುವಾಗಿ ಅಡ್ರಿನಲನ್ನು ಬೇರ್ಪಡಿಸಿ ತೆಗೆದು, ಹೀಗೇ ಇನ್ಸುಲಿನ್ ಅನ್ನೂ ಹರಳರೂಪದಲ್ಲಿ ತಯಾರಿಸಿದ. ಪ್ರಾಣಿಗಳ ಹಲವಾರು ಕಣಜಾಲಗಳ, ರಸಗಳ, ರಾಸಾಯನಿಕಗಳ ಗುಣಲಕ್ಷಣಗಳನ್ನೂ ವಿವರಿಸಿ ಹೆಸರಾಗಿದ್ದ.
		
(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ